ಕಂಬಗಳು, ಕಮಾನುಗಳು ಮತ್ತು ಗುದ್ದು ಕಂಬಗಳು : ಸೇತುವೆಗಳ ಮತ್ತು ಕಟ್ಟಡಗಳ ರಚನೆಯಲ್ಲಿ ಬಳಸುವ ಪದಗಳು. ತೂಕವನ್ನು ಹೊರಲು ಭದ್ರ ಅಡಿಪಾಯದ ಮೇಲೆ ಲಂಬವಾಗಿ ಸಾಕಷ್ಟು ಎತ್ತರಕ್ಕೆ ಮತ್ತು ಕ್ಲುಪ್ತದೂರಗಳಲ್ಲಿ ರಚಿಸಿರುವ ಕಟ್ಟಡಗಳ ಹೆಸರು ಕಂಬಗಳು (ಪಿಯರ್ಸ್‌). ಇವು ಊಧರ್ವ್‌ ದಿಕ್ಕಿನಲ್ಲಿ ಮಾತ್ರ ತೂಕವನ್ನು ಒಯ್ಯಬಲ್ಲವು. ವಿಶಿಷ್ಟವಾದ ವಕ್ರರೇಖಾವಿನ್ಯಾಸಗಳೂ ಅವುಗಳ ನಡುವೆ ತೆರಪುಗಳೂ ಇದ್ದು ಮೇಲಿನಿಂದ ಸಂಮರ್ದಿತವಾಗುವ ಊಧರ್ವ್‌ದಿಕ್ಕಿನ ಹೊರೆಯನ್ನು ಮಟ್ಟಸ ಒತ್ತಡವಾಗಿ ಪರಿವರ್ತಿಸುವ ರಚನೆಗಳೇ ಕಮಾನುಗಳು (ಆರ್ಚಸ್). ಕಮಾನಿನ ತಳದಲ್ಲಿ ಸಂಮರ್ದಿತವಾಗುವ ತೂಕವನ್ನು ಸ್ವೀಕರಿಸಲು ಏರ್ಪಟ್ಟ ಸ್ವಲ್ಪ ಅಗಲವಾದ ಶಿರೋಭಾಗದಿಂದ ಕೂಡಿರುವ ಕಂಬದ ಹೆಸರು ಗುದ್ದುಕಂಬ (ಅಬಟ್ಮೆಂಟ್). ಒಂದು ಸೇತುವೆಯ ಅಥವಾ ಕಟ್ಟಡದ ಮಟ್ಟಸ ಮೇಲುಭಾಗದ ತೂಕ ಕಮಾನುಗಳಲ್ಲಿ ಯುಕ್ತರೀತಿಯಲ್ಲಿ ವಿಘಟಿತಗೊಂಡು ಗುದ್ದುಕಂಬಗಳ ಹಾಗೂ ಕಂಬಗಳ ಮೂಲಕ ಅಡಿಪಾಯಕ್ಕೆ ಸಾಗುತ್ತದೆ. ತೂಕದ ಈ ಸಮಪ್ರಮಾಣದ ವಿತರಣೆ ಕಟ್ಟಡಕ್ಕೆ ಭದ್ರತೆಯನ್ನು ಒದಗಿಸುವುದು.

3.33 ಮೀ ಅಗಲದ ತೆರಪುಗಳುಳ್ಳ ಕಲ್ಲಿನ ಸೇತುವೆಗಳನ್ನು 0.91 ಮೀ ಮಂದವಾದ ಕಮಾನಿನ ಕಲ್ಲುಗಳಿಂದ ಕಟ್ಟಬೇಕಾಗುತ್ತದೆ. ಕಮಾನಿನ ಏರಿಕೆ (ರೈಸ್ó) ಕಂಬದ ತಲೆಯ ಮೇಲೆ ಕಮಾನಿನ ಕೆಳಭಾಗಕ್ಕೆ 1.82 ಮೀ (ಅಗಲದ 1/5 ಭಾಗ) 2.27 ಮೀ (ಅಗಲದ 1/4 ಭಾಗ) ಎತ್ತರವಾಗಿರುತ್ತದೆ. ಅದರ ಮೇಲೆ 0.91 ಮೀ ಮಂದವಾದ ಕಮಾನಿನ ಕಲ್ಲುಗಳುಳ್ಳ ಸೇತುವೆ ಬರುತ್ತದೆ. ಪ್ರತಿ ನಾಲ್ಕನೆಯ ಕಂಬವನ್ನು ಕೊಂಚ ಹೆಚ್ಚಿನ ಅಗಲದ ಗುದ್ದುಗಂಬವಾಗಿ ಸಂವಿಧಾನ ಮಾಡಿರುತ್ತಾರೆ. ಮೊದಲನೆಯ ಕಮಾನಿನ ತಲೆಗಲ್ಲುಗಳನ್ನು (ಕೀಸ್ಟೋನ್ಸ್‌) ಬಡಿದು ಕೂರಿಸುವಾಗ ಎರಡನೆಯ ಕಮಾನಿನ ಆಧಾರದ (ಸೆಂಟರಿಂಗ್) ಮೇಲೆ ಎರಡು ಕಡೆಗಳಿಂದಲೂ ಮೂರನೆಯ ಎರಡು ಭಾಗ ಕಮಾನಿನ ಕಲ್ಲುಗಳನ್ನೂ ಮೂರನೆಯ ಕಮಾನಿನ ಆದಾರದ ಮೇಲೆ ಮೂರರಲ್ಲಿ ಒಂದನೆಯ ಭಾಗ ಕಮಾನಿನ ಕಲ್ಲುಗಳನ್ನೂ (ಸಿಮೆಂಟಿಗೆ ಮರಳನ್ನು ಬೆರೆಸಿ ತಯಾರಿಸಿದ ಗಾರೆಯಲ್ಲಿ) ಜೋಡಿಸಿರುತ್ತಾರೆ. ಮೊದಲನೆಯ ತೆರಪಿನ ಕಮಾನಿನ ತಲೆಗಲ್ಲುಗಳು ಭದ್ರವಾದ ಮೇಲೆ, ಹೀಗೆಯೇ ನಾಲ್ಕನೆಯ ತೆರಪಿನಲ್ಲಿ ಮೂರನೆಯ ಒಂದು ಭಾಗ ಕಲ್ಲುಗಳನ್ನು ಜೋಡಿಸಿ ಎರಡನೆಯ ಕಮಾನಿನ ಕಲ್ಲುಗಳನ್ನು ಮೊದಲನೆಯದರಂತೆಯೇ ಸಿಮೆಂಟ್ ಗಾರೆಯಲ್ಲಿ ಬಡಿದು ಕೂರಿಸುತ್ತಾರೆ.

ಕಾವೇರಿ ನದಿಗೆ ಅಡ್ಡಲಾಗಿ ಹಾಸನ ಜಿಲ್ಲೆಯ ರಾಮನಾಥಪುರ ಕ್ಷೇತ್ರದಲ್ಲಿ ಮೂರು ಶತಮಾನಗಳಿಗೂ ಹಿಂದೆ (1636) ಕಟ್ಟಿದ ಕಲ್ಲಿನ ಕಮಾನುಗಳ ಸೇತುವೆಯೇ ಭಾರತದಲ್ಲಿ ಕೊನೆಯದು. ಅಲ್ಲಿಂದ ಮುಂದೆ ಅದರ ಸ್ಥಾನವನ್ನು ಪ್ರಬಲಿತಕಾಂಕ್ರೀಟು (ಭದ್ರತಾ ಸ್ವೀಟು) (ರೀಇನ್ಫೋಸ್ರ್ಡ್‌) ಮತ್ತು ಉಕ್ಕು ತೆಗೆದುಕೊಂಡಿವೆ. (ನೋಡಿ- ಕಮಾನು)			(ಎಚ್.ಸಿ.ಕೆ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ